shruthi

shruthi

Saturday, 24 November 2012

ಕನಸಿಗೊಂದು ಕೂಸು...!

ಕನಸೊಂದು ಕಂಡೆ
ಅದಕೊಂದು ಕುಸಾಯಿತು,
ಆ ಕೂಸಿಗೊಂದು ಆಸೆಯಾಯಿತು,
ಆಸೆ ಮತ್ತೊಂದು ಹಗಲುಗನಸಾಗಿ
ನನ್ನ ಕಾಡತೊಡಗಿತ್ತು!

ಕನಸನ್ನು ಬಸರು
ಮಾಡಿದ್ದು ಕಲ್ಪನೆಯೇ
ಎಂದು,
ಕನಸು ಹೇಳಲಿಲ್ಲ
ನಾನು ಕೇಳಲಿಲ್ಲ!

ಇನ್ನು ಮೆಚ್ಚಿ ಕಂಡ
ಹಗಲುಗನಸೆಲ್ಲ ,ತೊಗಲುಗೊಂಬೆಯಂತೆ
ನನ್ನದೇ ಆಟ,
ನನ್ನದೇ ಹುಡುಕಾಟ,
ನನ್ನದೇ ಬಡಿದಾಟ!

ಮತ್ತೊಂದು ಇರುಳಿಗೆ
ಕಾಯುತ ಭೂಮಿಯು
ಅಲಂಕರಿಸಿಕೊಂಡಳು,
ಸಂಜೆಯಂತೆ
ಸಡಗರದಲ್ಲಿ !

ನಾನು ಅವಳಂತೆ
ಮತ್ತೊಮ್ಮೆ
ಕನಸು ಕಾಣಲು
ಅಣಿಯಾದೆ
ಕನಸ ನನಸಾಗಿಸುವ ಮನಸಮಾಡಿ !!!!!!!!!
-ಶ್ರುತಿ

Tuesday, 11 September 2012

ಬೆಟ್ಟವ ದಾಟಿ ಬಂದ ಮೋಡದ ನೆರಳು.!

ಬೆಟ್ಟವ ದಾಟಿ ಬಂದ
ಮೋಡದ ನೆರಳು,
ತೊರೆದ ಮೇಲೆ
ಬಿಗಿದ ಕಣಿವೆಯ ಕೊರಳು

ಸಾಗರದ ಅಂಚಿನ ಮರಳಿಗೆ
ಅಲೆಗಳು ಹೇಳುವ ಗುಟ್ಟು
ಮರಳ ಸೇರಿ ಹಾಡಿ
ಹಂಚುವ ಗಾಳಿಗೆ ಗೊತ್ತು

ಬೆಳಗುವ ಕಿರಣ ತಂದ
ಬಳುವಳಿ
ಬಚ್ಚಿಟ್ಟುಕೊಂಡ ಭೂಮಿಗೆ
ತಾನೇ ಸ್ವಂತ

ಹೃದಯದಿ ಉದಯಿಸಿದ
ಚಂದ್ರನ ಮುಗುಳುನಗೆಯ
ಬಲ್ಲವಳು ನಲ್ಮೆಯ
ನೈದಿಲೆ ಮಾತ್ರ

ಕಾದ ಕಣ್ಣ ಬವಣೆ
ಅರಿಯಬಲ್ಲ
ಕಾದ ಹೆಂಚಿಗೆ ಕರುಣೆ
ತೋರಬಲ್ಲ
ಮಿಂಚಿಗೆ ಸಂಚ ಹೂಡಿ
ಸೆರೆಹಿಡಿಯಬಲ್ಲವನಾರು
ಬಲ್ಲವರ್ಯಾರು??
-ಶ್ರುತಿ

Friday, 27 July 2012

ಬಹುರೂಪಿ

ಅಗೋ ಅಲ್ಲೊಂದು
ಚಿನ್ನದ ತೇರು
ಹೂವಿನ ಸಿಂಗಾರ
ಮೇಳಗಳ ಝೇಂಕಾರ
ಪಂಜುಗಳ ಪಹರೆ
ಅರ್ಚನಾದಿಗಳಿಂದ ಅಲಂಕೃತ
ತೇಜಸ್ವಿಯಾದ ಮೂರ್ತಿ
ಗುಂಪುಗುಂಪಾದ ಜನಗಳು

ಇಗೋ ಇಲ್ಲೊಂದು
ಮನದ ತೇರು
ಸಿಂಗಾರವಿಲ್ಲ
ಝೇಂಕಾರವಿಲ್ಲ
ಪಹರೆಯಿಲ್ಲ
ಅಲಂಕಾರವಿಲ್ಲ
ಅದರದೇ ತೇಜಸ್ವಿ
ಇಲ್ಲಿ ನಾನೊಬ್ಬಳೆ

ಕಣ್ಣೆದುರಿನ ದೈವವು
ಮನದೊಳಗಿನ ಇವನು
ಇಬ್ಬರಿಗೂ ಮೆರವಣಿಗೆ
ತೆರೆಯಲ್ಲಿ ಒಬ್ಬರು
ಮರೆಯಲ್ಲಿಯೊಬ್ಬರು

ನೆಚ್ಚಿ ಮೆಚ್ಚಿ ನಾ
ಕಣ್ಮುಚ್ಚಿ ನೆನೆದು
ಕೈಮುಗಿದು ನಡದೆ
ಬಹುರೂಪಿ ನಿನೆಲ್ಲರೋಳಗಿರುವವನೆಂದು!!
-ಶೃತಿ

Saturday, 7 July 2012

ಮನಸ್ಸು ನೆರೆದಾಗ.!!

ಮನಸ್ಸು ನೆರೆದಾಗ
ಮಜ್ಜಿಗೆಯ ಹುಳಿ,
ಕಾಡುತಿವೆ ಅಮ್ಮನ ತುತ್ತು,
ಮರೆತ ಮುತ್ತು

ಬಾಲ್ಯ ಇನ್ನು ಕನಸಂತೆ,
ಮನದ ತುಂಬಾ ಚಿಂತೆಗಳ ಸಂತೆ
ಬರೀ ಸ್ವಾರ್ಥದ  ಜಾಗಟೆ,
ಹಣದ ತಮಟೆಯ ಸದ್ದು

ಸ್ಥಾನ ಮಾನಗಳ  ಗುದ್ದಾಟ
ತೃಪ್ತಿ  ಅತೃಪ್ತಿಗಳ ಎಳೆದಾಟ ,ಸೆಳೆದಾಟ
ಭಾವ ಸ್ಮಶಾನದಲ್ಲಿ ಅಲೆದಾಟ
ಆಗಾಗ ಉಮ್ಮಳಿಸುವ  ದುಃಖ
ಕಣ್ಣೋರಿಸಿದ  ಕೈಗಳ ನೆನಪು

ಸಂಬಂಧಗಳೆಲ್ಲ ಬೇಡಿಗಳೆನಿಸಿ,
ದ್ವಂದ್ವಗಳ ,ದೈವದಾಟಗಳ
ಹೊಕ್ಕು ಹೊರ ಬರುವಮುನ್ನ
ಆತ್ಮ ಸಂವಿಧಾನದಲ್ಲಿ ಹಲವು ತಿದ್ದುಪಡಿ

ಆಸೆ ಕನಸುಗಳ ಒತ್ತುವರಿ,
ಹುಡುಕುತ್ತಲೊಂದು ಗೊತ್ತುಗುರಿ
ಕಾಣುವ ಮುಂಚೆ ಭಾವಸ್ರಾವ!!
-ಶೃತಿ

Tuesday, 3 July 2012

ಹೋಗುವ ಮುನ್ನ .....!

ಸರಿದಿವೆ ಹೆಜ್ಜೆಗಳು
ಸರದಿಯಿಂದ
ಸೇರುವ ಬಯಕೆ
ಸುರಿವ ಮುಸ್ಸಂಜೆಯ
ಮಳೆಯಲ್ಲಿ ಕೊಚ್ಚಿಹೋಗಿದೆ

ಆಡದೆ ಉಳಿದ
ಅಮೂರ್ತ ಭಾವಗಳು
ಅಜ್ಞಾತವಾಗಿ,
ಅಳಿಸಿ ಹೋಗಿದೆ

ಕಲ್ಲು ಬಂಡೆಯಂತವಳು ನಾನು
ಕೋಟಿ ಉಳಿಪೆಟ್ಟಿಟ್ಟರು
ಕದಲಲಾರೇನು,
ಮೂಕ ಪ್ರಾಣಿನೊಂದರು
ಮರಗುವ ಮನಸ್ಸು
ನಿನ್ನದೆಂದು ಬಲ್ಲೆನು

ನಾ ಇಟ್ಟ ಹೆಜ್ಜೆಗಳೆಲ್ಲ
ಅಳಿಸಿ ಹೋಗಿಬಿಡಲಿ
ಅರಸದಿರು ನನ್ನ
ಪ್ರೀತಿ ಬಡಿಸಿದ್ದೇನೆ,
ಬಂದ ಬಿಡಿಸಿದ್ದೇನೆ
ಹೋಗಿ ಬರುವೆನೆಂದು ಹೇಳಲಾರೆನು
ಕಾರಣ
ನಾ ಮರೆಯಾಗುವ  ಸಮಯ
ಗ್ರಹಣವಲ್ಲ ಪಾಣಿಗ್ರಹಣ!!!!
-ಶೃತಿ

Tuesday, 8 May 2012

ಇದು ಬಿಸಿಲನಾಡಿನ ಭಾವಗೀತೆ
ಇಲ್ಲಿ ,,
ಬಿಸಿಲಿನ ಝಳ
ಬಿರಿದಿಹ ಭೂಮಿ
ಬಳಲಿದ ದೇಹಗಳು
ಬಾಗಿದ ಬೆನ್ನುಗಳು
ಒಣಗಿದ ಮರಗಳು

ಹನಿ ನೀರಿಗೆ ಪರಿತಪಿಸುವ
ಬಾಯಿಗಳು,ಬಾವಿಗಳು
ಬೋಳು ಮರಗಳು
ದಾಹವನೀಗದೆ ಕಂಗೆಟ್ಟ
ಜಾನುವಾರಗಳು

ಬಸಿಯುತ್ತಿರುವ ಬೆವರು
ತಿರುಗುತ್ತಿರುವ ಕಣ್ಣುಗಳು
ಕಾದ ಹಂಚಿನ ಮನೆಗಳು
ಕಂಡ ಕಂಡವರ ಮನೆಯ
ಹೊಂಡ,ಕೊಂಡಗಳಲ್ಲಿ
ಕಣ್ಣು ಹಾಕುವ ಪಕ್ಷಿಗಳು

ಇಲ್ಲಿ ಬದುಕು ಬರ್ಬರ
ಬಡವರಿಗೆ ಮಾತ್ರ,
ಸಿರಿವಂತರಿಗೆ ಎಸಿ ರೂಮ್,ಮಿನರಲ್ ವಾಟರ್
ಇನ್ನು ದುಡಿವವರ ಪಾಡನು
ಕೇಳದಿದ್ದರೆ ಲೇಸು

ಬರವನ್ನು ಅಪ್ಪಿ ಕುಳಿತ
ಭೂತಾಯಿಯ ಮನವನೋಲಿಸಲು
ಬರಬಾರದ ಒಮ್ಮೆ ಮಳೆರಾಯ?
-ಶ್ರುತಿ

 

Friday, 6 April 2012

ಕಡೆಗೆ ನಿನ್ನ ಜಾತಿಗಾದರು ನ್ಯಾಯ ಮಾಡು ಮಾನವ!!!

ಮನದ ಕೊಳೆಯ ತೊಳೆವ
ಮಡಿವಾಳ,
ತೊರೆದ ಮನಸುಗಳ ಹೊಲೆಯುವ
ದರ್ಜಿ ,

ಅಂದದ ಆಲೋಚನೆಗಳ ಹದ ಮಾಡಿ
ರೂಪ ಕೊಡುವ ಕುಂಬಾರ,
ಆತ್ಮಕ್ಕೆ ಲಿಂಗವನ್ನು ಧರಿಸಿ
ಪೂಜಿಸುವ ಜಂಗಮ,

ಅಕ್ಷರ ಜ್ಞ್ಯಾನ ದಾನ ಮಾಡುವ
ಬ್ರಾಹ್ಮಣ,
ಸ್ನೇಹ,ಪ್ರೀತಿಯನ್ನು ಕೊಡು ಕೊಳ್ಳುವ
ವೈಶ್ಯ ,
ಅರಿಷಡ್ವರ್ಗಗಳೊಂದಿಗೆ ಹೋರಾಡುವ
ಕ್ಷತ್ರಿಯ,
ಅಸಾಹಯಕರ ಸೇವೆಗೈಯುವ
ಶೂದ್ರ ,
ದುಶ್ಚಟ ಮತ್ತು ದುರಾಲೋಚನೆಗಳಿಗೆ
ಅಸ್ಪೃಶ್ಯನಾಗಿ
ಕಡೆಗೆ ನಿನ್ನ ಜಾತಿಗಾದರು ನ್ಯಾಯ ಮಾಡು ಮಾನವ!!!
-ಶ್ರುತಿ

Saturday, 24 March 2012

ಮೊದಲ ಹೆಜ್ಜೆ...........!


ಎಲ್ಲೊ ಮೊಳುಗುತಿಹ ಮೇಳ..!!

ಎಲ್ಲೊ ಮೊಳುಗುತಿಹ ಮೇಳ
ಕದಡುತಿದೆ ನನ್ನೆದೆಯ ತಾಳ
ಹಾಕಬೇಕೆಂದರೆ ನಾಲ್ಕು ಅಕ್ಷತೆ ಕಾಳ
ದ್ವೇಷ ,ದಳ್ಳುರಿಯ ಕೋಳ!

ಶಕುನಿಗಳು ಹಲವರು ಷಡ್ಯಂತ್ರ ನೂರು
ಒಡಹುಟ್ಟಿದವರಲ್ಲಿ ಸ್ವಾರ್ಥ ಸಾದನೆಗಾಗಿ
ಬಿತ್ತಿದ ಬೀಜ ಇಂದು ಮೊಳಕೆ ಒಡೆದು ಮರವಾಗುತಿದೆಯೆಂದು
ಪಾನಕದಲ್ಲಿ ಅದ್ದಿದಂತ ಮುಖಗಳನು ಹೊತ್ತು ತಿರುಗುತಿದ್ದಾರೆ ಅವರೆಲ್ಲ!

ಕಾಲಚಕ್ರನ ಅಡಿಗೆ ಬೀಳದವರು ಯಾರು
ಮಾಡಿದ್ದೂ ಉಣಬೇಕು,ಕರೆದಾಗ ನಡಿಬೇಕು
ಇರುವುದರೊಳಗೆ ಇಬ್ಬರನು ನಗಿಸುತ
ಒಡೆದ ಮನಸುಗಳ ಬೆಸೆಯುತ ಬಾಳಿ ನೋಡು!
-ಶ್ರುತಿ

Thursday, 22 March 2012

ಹೃದಯಕ್ಕೆ ಬಿದ್ದ ಕಸರು ಕಣೆ ನೀನು...........!

ಈ ಸರಪಳಿ ಸರಿಸಲೋಲ್ಲೇ ಗೆಳತಿ,
ನಿನ್ನ ನೆನಪಿನ ಕಚಗುಳಿ
ಮರಯಲಾರೆ,
ಬಂಧಿಸಿರಲ್ಲಿಲ್ಲ ನನ್ನ ನೀನು
ಆದರು ಬಂಧಿ ನಾನು!

ನಸುಕಿನ ಮಂಜಿನಲಿ
ಕಂಡು ಮರೆಯಾದೆ,
ಪ್ರತಿದಿನವೂ ಕಾದೆ
ಮತ್ತೆಂದು ನೀ ಬರದೆ ಹೋದೆ!

ಆದರೇನು
ನಿನ್ನ ನೆನಪಿನ ಹುತ್ತ
ನನ್ನ ಸುತ್ತ,
ಕೆಡಹಬಾರದೇಕೆ ಹಾಗೆ ಒಮ್ಮೆ
ಬಲಗಾಲನಿಟ್ಟು ನನ್ನ ಮನಕ್ಕೆ!

ಹೆಸರು ಗೊತ್ತಿಲ್ಲ.ಊರು ಗೊತ್ತಿಲ್ಲ
ಉಸಿರು ಗೊತ್ತು,ನೀ ನನ್ನ ಜೀವ
ನೀನಿರಲು ಬೇಕೇ ಬೇರೆ ಜಾಗ ?
ಕಣ್ಣಿಗೆ ಬಿದ್ದ ಕಸರಾದರೆ
ಉಫ್ ಎನ್ನಬಹುದಿತ್ತು
ಹೃದಯಕ್ಕೆ ಬಿದ್ದ ಕಸರು
ಕಣೆ ನೀನು...........!
-ಶ್ರುತಿ

Tuesday, 24 January 2012

ಹಾದಿಗುಂಟ......!!!

ಸಾಗುವಳಿ ಮಾಡದ ಭೂಮಿ,
ಸಾಗದ ಹಾದಿ,
ಸದ್ದಿಲದೆ ಘಟಿಸಿದ
ಸಾವಿರ ಘಟನೆಗಳು

ಚಿಗುರೆಲೆಗಳು,ತಂಬೆಲರು
ತನುವಿಗೆ ಸಂತಸದ
ತನ್ಮಯತೆ ನೀಡಿ
ತೃಪ್ತಿ ಪಡಿಸುತಿವೆ

ಹರೆಯ ಹೊರೆಯಾಗಿ
ಹರಿವ ನದಿಯಾಗಿ
ಹೂ೦ಕರಿಸಿ,ಹುರಿದುಂಬಿಸಿ
ಹುಸಿಯಾಗಿ ಕಳೆದುಹೊಗುತಿದೆ

ಅವಿತವಿತು ಕುಳಿತ
ಕನಸುಗಳು ಹಲವು,
ಅವನು ಅವರಾಗಿ
ಅನುರಾಗಿಯಾಗಿ ಭೈರಾಗಿ
ತಾನಾಗಬೇಕೆಂದುಕೊಳ್ಳುತಿರುವವನು

ರೆಕ್ಕೆ ಬಲಿತ ಹಕ್ಕಿಯಾದರು
ಹಾರಿತು ,ಹುಡುಕುತ ತನ್ನ ಪಾಡು
ಹಸಿವ ದಾಳಿಗೆ ತತ್ತರಿಸದ ಕಣವುಂಟೇ?
ಕೂಗಿ ಕೇಳದ ಕರುಳುoಟೇ?

ಪ್ರತಿದಿನವೂ ಹೊಸ ಪಗಡೆ
ಸೋತವನು ಸತ್ತ ,
ಗೆದ್ದವನು ಸತ್ತ,
ನೀ ಹೋಗುವ ದಾರಿಗೆ
ನಾ ಜೊತೆಗಾರ್ತಿ ಅಲ್ಲ
ಸಂಗಾತಿ ಅಲ್ಲ
ಬರೀ ಪಾಲುಗಾರ್ತಿ!!!!

-ಶೃತಿ 

Monday, 2 January 2012

ಹೂವಿಗಾಗಿ..!!

ಅರಳಿದ ಹೂವಿಗೆ
ಯಾರು ದಿಕ್ಕು ?
ಮೊಗ್ಗು ಹೂವಾದ
ಬಾಡಿ ಬಯಲಿಗೆ
ಬಿದ್ದ ಕ್ಷಣಗಳ ಕಂಡವರೆಷ್ಟು?

ಮುಂಜಾವಿನಲ್ಲಿ ಚುಂಬಿಸಿದ
ಕಿರಣಗಳು
ಹೊತ್ತೇರುವ ಮುನ್ನ ಮುದ್ದಿಸಿದ
ದುಂಬಿಗಳ
ಮರೆತು

ತಾ ಸಾಕ್ಷಿಯಾಗಬೇಕಿದೆ
ಯಾರದೋ  ಪ್ರೀತಿಗೆ,
ಮೂಡಿಯೇರಬೇಕಿದೆ
ಇನ್ನ್ಯಾರದೋ  ಸಿಂಗಾರಕ್ಕೆ

ಹಾರದಿ ಬಂದಿಯಾಗಿ
ಹಂಚಿಕೊಳ್ಳಬೇಕಿದೆ
ನಕ್ಕವರ ನಗು
ಅತ್ತವರ ಅಳು

ತನ್ನ ಕೀಳುವ ಕೈಗಳಿಗೆ
ಹಿಂಸಿಸದೆ,ಹೆಸರ ಕೇಳದೆ
ಇನ್ನಷ್ಟು ಹತ್ತಿರವಾಗಿ
ಹಾರೈಸುವ ಹೂವೆ

ನೀ ಕಾಲನಾಜ್ಞೆಗೆ
ಮುದುಡಿ ಬಸವಳಿದು
ಕುಸಿದು ಬಿಳುವಾಗ
ನಿನ್ನ್ಯಾರು ಕೇಳಿದರೆ??
ಮುಸ್ಸಂಜೆಯಲಿ ಮರೆಯಾದ ಕಿರಣಗಳೇ ?
ಮರಳಿ ,ಬಂದ ಹಾದಿ ಹಿಡಿದ ದುಂಬಿಗಳೇ?
ಪ್ರೀತಿಗಾಗಿ ಮುತ್ತಿಟ್ಟವರೆ ?
ಸಿಂಗಾರಕ್ಕಾಗಿ ಮೈದಡವಿದವರೆ?
ನಿನ್ನ ಬಂದಿಸಿ ಬಳಸಿಕೊಂಡವರೆ ?
ಹೇಳೇ????
-ಶೃತಿ



Sunday, 1 January 2012

ಪ್ಲಾಸ್ಟಿಕ್ ಪರಮಾತ್ಮ !!

ಕಲ್ಪನೆಗಿದು ಕೃತಿಯಲ್ಲ
ಕವಿಹೃದಯದ ಕಥೆಯಲ್ಲ
ಕಲಿಯುಗದ ಅಧಿದೇವತೆ
ಪ್ಲಾಸ್ಟಿಕ್ ಮಾತೆ!
ಎತ್ತ ನೋಡಿದರತ್ತ
ಬರಿ ಇದರ ಮಾತೆss!


ನಿಸರ್ಗದ ನೀರವ
ಮೌನವ ನಿರಂಕುಶವಾಗಿ
ಆಳುತಿದೆ ಈ ನಿರ್ಜಿವ
ನಿಲ್ಲಿಸದಿದ್ದರೆ ಈ ಹಾವಳಿ
ನಾವಿದರ ದಾಹಕ್ಕೆ ಬಲಿ!


ಅವಿಬಾಜ್ಯ ಅಂಗವಾಗಿ
ಸವಿಯಾದ ಸುಧೆಯಾಗಿ
ಉಣಿಸುತಿದೆ ನಂಜನ್ನು
ಹನಿ ಹನಿಯಾಗಿ!


ಬಿಟ್ಟರೆ ಕಸವಾದೆ!
ಸುಟ್ಟರೆ ವಿಷವಾದೆ!
ಸುಡದೆ ಹಾಗೆ ಇಟ್ಟರೆ
ದನ ಕರುಗಳಿಗೆ ಅಹಾರವಾದೆ!
ಕೊಳೆತು ಜೀವಸಂಕುಲಕ್ಕೆ ನಾ ಶಾಪವಾದೆ!!!!!!!!!
-ಶ್ರುತಿ

ನೆರಳಿಗೆ ನೆರಳು!!!!!!!!!!


ಏಕಾಂತದಲ್ಲಿ ಮಾತಾಡಿದ
ಮೌನ,
ಮೇಘಗಳ ಘರ್ಷಣೆಗೂ
ಮೀರಿದ ಸದ್ದು!

ಕದ್ದು ಕೇಳಿಸಿಕೊಂಡರು
ಕೇಳದಂತೆ ಪಿಸುಗುಡುವ ಮನ,
ಸಾಲಿನಲ್ಲಿ ಸಾಗುವ
ಹೆಜ್ಜೆಗಳಲ್ಲೇನೋ ಕೊಂಕು,
ಡೊಂಕು ನೆಲದ್ದೋ ನಡೆವ ಪಾದಗಳದ್ದೋ! ?

ಕಣ್ರೆಪ್ಪೆ ಬಡಿದಾಗೊಮ್ಮೆ
ಮೂಡುವ ಕನಸು,
ಕಣ್ಣ ಬಿಡುವ ಮುನ್ನ ಮರೆಯಾಯಿತು,
ಕೂಗಿ ಹೇಳುವ ಕಾತುರವಿದ್ದರು
ಬಿಗಿದ ಕೊರಳು,ಬಿಗಿದಂತೆ ಉರುಳು

ಸೋಗಿನದ್ದು ಮನಸ್ಸು
ಸೆಳೆದು ಸರಪಳಿ ಹಾಕಿತ್ತು!
ಕಾರಣ ಹುಡುಕಲು ನೆನಪಾಯ್ತು
ಸೋಕಿತ್ತು ನೆರಳಿಗೆ ನೆರಳು!!!!!!!!!!
-ಶ್ರುತಿ


ಆಸೆಗಳು!

ಅಗ್ಗಕ್ಕೆ ಸಿಗುತಿವೆ
ಅಸಲಿ ಆಸೆಗಳು!
ಅಳೆದಳೆದು ಮಾರಿದಷ್ಟು
ಆಳೆತ್ತರಕೆ ಬೆಳೆವಾಸೆಗಳು!!

ಕವಿಯ ಕೈಯ್ಯಲ್ಲಿನ

ಕವಿತೆಯಾಗುವಾಸೆ!
ಶಿಲ್ಪಿಯೊಬ್ಬನ ಉಳಿಪೆಟ್ಟಿಗೆ
ಸುಂದರ ಶಿಲೆಯಾಗುವಾಸೆ!!

ಕಲೆಗಾರನ ಕುಂಚದಿ

ಮೂಡಿದ ಕಲೆಯಾಗುವಾಸೆ!
ಕಮ್ಮಾರನ ಕುಲುಮೆಯಲಿ
ಕಬ್ಬಿಣದ ಸರಳಾಗುವಾಸೆ!!

ಚಮ್ಮಾರನ ಚಪ್ಪಲಿಗೆ

ಹೊಡೆವ ಮೊಳೆಯಾಗುವಾಸೆ!
ಹೊರುವವನ ಹೆಗಲೇರಿ
ಚಟ್ಟವಾಗುವಾಸೆ!!

ಅಲ್ಪನಾದರು ಅಡುಗೆಯಲ್ಲಿ

ಉಪ್ಪಾಗುವಾಸೆ!
ಅಂಬಲಿಯ ಬೇಡುವ
ಅಂಗೈಗೆ ಅಗಳಾಗುವಾಸೆ!!

ಹೂಳಿಡಲು ,ಸುಡಲು

ಓಡಾಡುವವರ ಮಧ್ಯ
ನಾನೇನನು ಸಾದಿಸದಿದ್ದರೇನು?
ಸಾವನ್ನು ಸಾಧಿಸಿಯೇ ಸಾಯುತ್ತೆನೆಂದು
ಹೇಳಿಬಿಡುವಾಸೆ!!!!!!!!
-ಶ್ರುತಿ

ಬೆಳಕು................?

ಕತ್ತಲೆಗೆ ಕತ್ತಲೆ
ಸಾಕ್ಷಿಯಾದರೆ
ಬರೀ ಕನಸಾಗದೆನು
ಬದುಕು?

ಹಗಲಲ್ಲಿ
ಇರುಳಿನ ಹುಡುಕಾಟ
ಇರುಳಲ್ಲಿ
ಹಗಲಿನ ತೊಳಲಾಟ,
ಒಮ್ಮೆ ಕೊಡವಿದರೆ
ಕೊನೆಯಲ್ಲ ಬದುಕು
ನಿಲ್ಲು ನಿನ್ನ ನೀನು ತೆರುದುಕೋ

ಕೊಂಡದ್ದಲ್ಲ ಬದುಕು
ಕೊಟ್ಟವನ ಮನೆ ಮುಚ್ಚಲು
ಪಡಕೊಂಡದ್ದು ಬಟಾಬಯಲಿನ ಬದುಕು

ಪರಮಾತ್ಮನಲ್ಲದಿದ್ದರು ಇಲ್ಲದಿದ್ದರೂ
ಪರರ ಆತ್ಮವನ್ನು ಒಲಿಸು ನಲಿಸು
ಬದುಕು ಸಲಿಸು

ಕೆಂಡವಾದರೇನು ಅವನು
ಜಗವನೆ ಬೆಳಗುತಿಹನು
ಕರುಣಾಳು ನೀನು
ಆಗಬಾರದೇಕೆ
ಜಗದ ಪುಟ್ಟ ಜೀವದಾಶಯಕ್ಕೆ ಬೆಳಕು................?
-ಶ್ರುತಿ

ಕಳೆದು ಹೋಗಬೇಕಿದೆ!!