shruthi

shruthi

Tuesday, 24 January 2012

ಹಾದಿಗುಂಟ......!!!

ಸಾಗುವಳಿ ಮಾಡದ ಭೂಮಿ,
ಸಾಗದ ಹಾದಿ,
ಸದ್ದಿಲದೆ ಘಟಿಸಿದ
ಸಾವಿರ ಘಟನೆಗಳು

ಚಿಗುರೆಲೆಗಳು,ತಂಬೆಲರು
ತನುವಿಗೆ ಸಂತಸದ
ತನ್ಮಯತೆ ನೀಡಿ
ತೃಪ್ತಿ ಪಡಿಸುತಿವೆ

ಹರೆಯ ಹೊರೆಯಾಗಿ
ಹರಿವ ನದಿಯಾಗಿ
ಹೂ೦ಕರಿಸಿ,ಹುರಿದುಂಬಿಸಿ
ಹುಸಿಯಾಗಿ ಕಳೆದುಹೊಗುತಿದೆ

ಅವಿತವಿತು ಕುಳಿತ
ಕನಸುಗಳು ಹಲವು,
ಅವನು ಅವರಾಗಿ
ಅನುರಾಗಿಯಾಗಿ ಭೈರಾಗಿ
ತಾನಾಗಬೇಕೆಂದುಕೊಳ್ಳುತಿರುವವನು

ರೆಕ್ಕೆ ಬಲಿತ ಹಕ್ಕಿಯಾದರು
ಹಾರಿತು ,ಹುಡುಕುತ ತನ್ನ ಪಾಡು
ಹಸಿವ ದಾಳಿಗೆ ತತ್ತರಿಸದ ಕಣವುಂಟೇ?
ಕೂಗಿ ಕೇಳದ ಕರುಳುoಟೇ?

ಪ್ರತಿದಿನವೂ ಹೊಸ ಪಗಡೆ
ಸೋತವನು ಸತ್ತ ,
ಗೆದ್ದವನು ಸತ್ತ,
ನೀ ಹೋಗುವ ದಾರಿಗೆ
ನಾ ಜೊತೆಗಾರ್ತಿ ಅಲ್ಲ
ಸಂಗಾತಿ ಅಲ್ಲ
ಬರೀ ಪಾಲುಗಾರ್ತಿ!!!!

-ಶೃತಿ 

Monday, 2 January 2012

ಹೂವಿಗಾಗಿ..!!

ಅರಳಿದ ಹೂವಿಗೆ
ಯಾರು ದಿಕ್ಕು ?
ಮೊಗ್ಗು ಹೂವಾದ
ಬಾಡಿ ಬಯಲಿಗೆ
ಬಿದ್ದ ಕ್ಷಣಗಳ ಕಂಡವರೆಷ್ಟು?

ಮುಂಜಾವಿನಲ್ಲಿ ಚುಂಬಿಸಿದ
ಕಿರಣಗಳು
ಹೊತ್ತೇರುವ ಮುನ್ನ ಮುದ್ದಿಸಿದ
ದುಂಬಿಗಳ
ಮರೆತು

ತಾ ಸಾಕ್ಷಿಯಾಗಬೇಕಿದೆ
ಯಾರದೋ  ಪ್ರೀತಿಗೆ,
ಮೂಡಿಯೇರಬೇಕಿದೆ
ಇನ್ನ್ಯಾರದೋ  ಸಿಂಗಾರಕ್ಕೆ

ಹಾರದಿ ಬಂದಿಯಾಗಿ
ಹಂಚಿಕೊಳ್ಳಬೇಕಿದೆ
ನಕ್ಕವರ ನಗು
ಅತ್ತವರ ಅಳು

ತನ್ನ ಕೀಳುವ ಕೈಗಳಿಗೆ
ಹಿಂಸಿಸದೆ,ಹೆಸರ ಕೇಳದೆ
ಇನ್ನಷ್ಟು ಹತ್ತಿರವಾಗಿ
ಹಾರೈಸುವ ಹೂವೆ

ನೀ ಕಾಲನಾಜ್ಞೆಗೆ
ಮುದುಡಿ ಬಸವಳಿದು
ಕುಸಿದು ಬಿಳುವಾಗ
ನಿನ್ನ್ಯಾರು ಕೇಳಿದರೆ??
ಮುಸ್ಸಂಜೆಯಲಿ ಮರೆಯಾದ ಕಿರಣಗಳೇ ?
ಮರಳಿ ,ಬಂದ ಹಾದಿ ಹಿಡಿದ ದುಂಬಿಗಳೇ?
ಪ್ರೀತಿಗಾಗಿ ಮುತ್ತಿಟ್ಟವರೆ ?
ಸಿಂಗಾರಕ್ಕಾಗಿ ಮೈದಡವಿದವರೆ?
ನಿನ್ನ ಬಂದಿಸಿ ಬಳಸಿಕೊಂಡವರೆ ?
ಹೇಳೇ????
-ಶೃತಿ



Sunday, 1 January 2012

ಪ್ಲಾಸ್ಟಿಕ್ ಪರಮಾತ್ಮ !!

ಕಲ್ಪನೆಗಿದು ಕೃತಿಯಲ್ಲ
ಕವಿಹೃದಯದ ಕಥೆಯಲ್ಲ
ಕಲಿಯುಗದ ಅಧಿದೇವತೆ
ಪ್ಲಾಸ್ಟಿಕ್ ಮಾತೆ!
ಎತ್ತ ನೋಡಿದರತ್ತ
ಬರಿ ಇದರ ಮಾತೆss!


ನಿಸರ್ಗದ ನೀರವ
ಮೌನವ ನಿರಂಕುಶವಾಗಿ
ಆಳುತಿದೆ ಈ ನಿರ್ಜಿವ
ನಿಲ್ಲಿಸದಿದ್ದರೆ ಈ ಹಾವಳಿ
ನಾವಿದರ ದಾಹಕ್ಕೆ ಬಲಿ!


ಅವಿಬಾಜ್ಯ ಅಂಗವಾಗಿ
ಸವಿಯಾದ ಸುಧೆಯಾಗಿ
ಉಣಿಸುತಿದೆ ನಂಜನ್ನು
ಹನಿ ಹನಿಯಾಗಿ!


ಬಿಟ್ಟರೆ ಕಸವಾದೆ!
ಸುಟ್ಟರೆ ವಿಷವಾದೆ!
ಸುಡದೆ ಹಾಗೆ ಇಟ್ಟರೆ
ದನ ಕರುಗಳಿಗೆ ಅಹಾರವಾದೆ!
ಕೊಳೆತು ಜೀವಸಂಕುಲಕ್ಕೆ ನಾ ಶಾಪವಾದೆ!!!!!!!!!
-ಶ್ರುತಿ

ನೆರಳಿಗೆ ನೆರಳು!!!!!!!!!!


ಏಕಾಂತದಲ್ಲಿ ಮಾತಾಡಿದ
ಮೌನ,
ಮೇಘಗಳ ಘರ್ಷಣೆಗೂ
ಮೀರಿದ ಸದ್ದು!

ಕದ್ದು ಕೇಳಿಸಿಕೊಂಡರು
ಕೇಳದಂತೆ ಪಿಸುಗುಡುವ ಮನ,
ಸಾಲಿನಲ್ಲಿ ಸಾಗುವ
ಹೆಜ್ಜೆಗಳಲ್ಲೇನೋ ಕೊಂಕು,
ಡೊಂಕು ನೆಲದ್ದೋ ನಡೆವ ಪಾದಗಳದ್ದೋ! ?

ಕಣ್ರೆಪ್ಪೆ ಬಡಿದಾಗೊಮ್ಮೆ
ಮೂಡುವ ಕನಸು,
ಕಣ್ಣ ಬಿಡುವ ಮುನ್ನ ಮರೆಯಾಯಿತು,
ಕೂಗಿ ಹೇಳುವ ಕಾತುರವಿದ್ದರು
ಬಿಗಿದ ಕೊರಳು,ಬಿಗಿದಂತೆ ಉರುಳು

ಸೋಗಿನದ್ದು ಮನಸ್ಸು
ಸೆಳೆದು ಸರಪಳಿ ಹಾಕಿತ್ತು!
ಕಾರಣ ಹುಡುಕಲು ನೆನಪಾಯ್ತು
ಸೋಕಿತ್ತು ನೆರಳಿಗೆ ನೆರಳು!!!!!!!!!!
-ಶ್ರುತಿ


ಆಸೆಗಳು!

ಅಗ್ಗಕ್ಕೆ ಸಿಗುತಿವೆ
ಅಸಲಿ ಆಸೆಗಳು!
ಅಳೆದಳೆದು ಮಾರಿದಷ್ಟು
ಆಳೆತ್ತರಕೆ ಬೆಳೆವಾಸೆಗಳು!!

ಕವಿಯ ಕೈಯ್ಯಲ್ಲಿನ

ಕವಿತೆಯಾಗುವಾಸೆ!
ಶಿಲ್ಪಿಯೊಬ್ಬನ ಉಳಿಪೆಟ್ಟಿಗೆ
ಸುಂದರ ಶಿಲೆಯಾಗುವಾಸೆ!!

ಕಲೆಗಾರನ ಕುಂಚದಿ

ಮೂಡಿದ ಕಲೆಯಾಗುವಾಸೆ!
ಕಮ್ಮಾರನ ಕುಲುಮೆಯಲಿ
ಕಬ್ಬಿಣದ ಸರಳಾಗುವಾಸೆ!!

ಚಮ್ಮಾರನ ಚಪ್ಪಲಿಗೆ

ಹೊಡೆವ ಮೊಳೆಯಾಗುವಾಸೆ!
ಹೊರುವವನ ಹೆಗಲೇರಿ
ಚಟ್ಟವಾಗುವಾಸೆ!!

ಅಲ್ಪನಾದರು ಅಡುಗೆಯಲ್ಲಿ

ಉಪ್ಪಾಗುವಾಸೆ!
ಅಂಬಲಿಯ ಬೇಡುವ
ಅಂಗೈಗೆ ಅಗಳಾಗುವಾಸೆ!!

ಹೂಳಿಡಲು ,ಸುಡಲು

ಓಡಾಡುವವರ ಮಧ್ಯ
ನಾನೇನನು ಸಾದಿಸದಿದ್ದರೇನು?
ಸಾವನ್ನು ಸಾಧಿಸಿಯೇ ಸಾಯುತ್ತೆನೆಂದು
ಹೇಳಿಬಿಡುವಾಸೆ!!!!!!!!
-ಶ್ರುತಿ

ಬೆಳಕು................?

ಕತ್ತಲೆಗೆ ಕತ್ತಲೆ
ಸಾಕ್ಷಿಯಾದರೆ
ಬರೀ ಕನಸಾಗದೆನು
ಬದುಕು?

ಹಗಲಲ್ಲಿ
ಇರುಳಿನ ಹುಡುಕಾಟ
ಇರುಳಲ್ಲಿ
ಹಗಲಿನ ತೊಳಲಾಟ,
ಒಮ್ಮೆ ಕೊಡವಿದರೆ
ಕೊನೆಯಲ್ಲ ಬದುಕು
ನಿಲ್ಲು ನಿನ್ನ ನೀನು ತೆರುದುಕೋ

ಕೊಂಡದ್ದಲ್ಲ ಬದುಕು
ಕೊಟ್ಟವನ ಮನೆ ಮುಚ್ಚಲು
ಪಡಕೊಂಡದ್ದು ಬಟಾಬಯಲಿನ ಬದುಕು

ಪರಮಾತ್ಮನಲ್ಲದಿದ್ದರು ಇಲ್ಲದಿದ್ದರೂ
ಪರರ ಆತ್ಮವನ್ನು ಒಲಿಸು ನಲಿಸು
ಬದುಕು ಸಲಿಸು

ಕೆಂಡವಾದರೇನು ಅವನು
ಜಗವನೆ ಬೆಳಗುತಿಹನು
ಕರುಣಾಳು ನೀನು
ಆಗಬಾರದೇಕೆ
ಜಗದ ಪುಟ್ಟ ಜೀವದಾಶಯಕ್ಕೆ ಬೆಳಕು................?
-ಶ್ರುತಿ

ಕಳೆದು ಹೋಗಬೇಕಿದೆ!!