shruthi

shruthi

Friday, 27 July 2012

ಬಹುರೂಪಿ

ಅಗೋ ಅಲ್ಲೊಂದು
ಚಿನ್ನದ ತೇರು
ಹೂವಿನ ಸಿಂಗಾರ
ಮೇಳಗಳ ಝೇಂಕಾರ
ಪಂಜುಗಳ ಪಹರೆ
ಅರ್ಚನಾದಿಗಳಿಂದ ಅಲಂಕೃತ
ತೇಜಸ್ವಿಯಾದ ಮೂರ್ತಿ
ಗುಂಪುಗುಂಪಾದ ಜನಗಳು

ಇಗೋ ಇಲ್ಲೊಂದು
ಮನದ ತೇರು
ಸಿಂಗಾರವಿಲ್ಲ
ಝೇಂಕಾರವಿಲ್ಲ
ಪಹರೆಯಿಲ್ಲ
ಅಲಂಕಾರವಿಲ್ಲ
ಅದರದೇ ತೇಜಸ್ವಿ
ಇಲ್ಲಿ ನಾನೊಬ್ಬಳೆ

ಕಣ್ಣೆದುರಿನ ದೈವವು
ಮನದೊಳಗಿನ ಇವನು
ಇಬ್ಬರಿಗೂ ಮೆರವಣಿಗೆ
ತೆರೆಯಲ್ಲಿ ಒಬ್ಬರು
ಮರೆಯಲ್ಲಿಯೊಬ್ಬರು

ನೆಚ್ಚಿ ಮೆಚ್ಚಿ ನಾ
ಕಣ್ಮುಚ್ಚಿ ನೆನೆದು
ಕೈಮುಗಿದು ನಡದೆ
ಬಹುರೂಪಿ ನಿನೆಲ್ಲರೋಳಗಿರುವವನೆಂದು!!
-ಶೃತಿ

Saturday, 7 July 2012

ಮನಸ್ಸು ನೆರೆದಾಗ.!!

ಮನಸ್ಸು ನೆರೆದಾಗ
ಮಜ್ಜಿಗೆಯ ಹುಳಿ,
ಕಾಡುತಿವೆ ಅಮ್ಮನ ತುತ್ತು,
ಮರೆತ ಮುತ್ತು

ಬಾಲ್ಯ ಇನ್ನು ಕನಸಂತೆ,
ಮನದ ತುಂಬಾ ಚಿಂತೆಗಳ ಸಂತೆ
ಬರೀ ಸ್ವಾರ್ಥದ  ಜಾಗಟೆ,
ಹಣದ ತಮಟೆಯ ಸದ್ದು

ಸ್ಥಾನ ಮಾನಗಳ  ಗುದ್ದಾಟ
ತೃಪ್ತಿ  ಅತೃಪ್ತಿಗಳ ಎಳೆದಾಟ ,ಸೆಳೆದಾಟ
ಭಾವ ಸ್ಮಶಾನದಲ್ಲಿ ಅಲೆದಾಟ
ಆಗಾಗ ಉಮ್ಮಳಿಸುವ  ದುಃಖ
ಕಣ್ಣೋರಿಸಿದ  ಕೈಗಳ ನೆನಪು

ಸಂಬಂಧಗಳೆಲ್ಲ ಬೇಡಿಗಳೆನಿಸಿ,
ದ್ವಂದ್ವಗಳ ,ದೈವದಾಟಗಳ
ಹೊಕ್ಕು ಹೊರ ಬರುವಮುನ್ನ
ಆತ್ಮ ಸಂವಿಧಾನದಲ್ಲಿ ಹಲವು ತಿದ್ದುಪಡಿ

ಆಸೆ ಕನಸುಗಳ ಒತ್ತುವರಿ,
ಹುಡುಕುತ್ತಲೊಂದು ಗೊತ್ತುಗುರಿ
ಕಾಣುವ ಮುಂಚೆ ಭಾವಸ್ರಾವ!!
-ಶೃತಿ

Tuesday, 3 July 2012

ಹೋಗುವ ಮುನ್ನ .....!

ಸರಿದಿವೆ ಹೆಜ್ಜೆಗಳು
ಸರದಿಯಿಂದ
ಸೇರುವ ಬಯಕೆ
ಸುರಿವ ಮುಸ್ಸಂಜೆಯ
ಮಳೆಯಲ್ಲಿ ಕೊಚ್ಚಿಹೋಗಿದೆ

ಆಡದೆ ಉಳಿದ
ಅಮೂರ್ತ ಭಾವಗಳು
ಅಜ್ಞಾತವಾಗಿ,
ಅಳಿಸಿ ಹೋಗಿದೆ

ಕಲ್ಲು ಬಂಡೆಯಂತವಳು ನಾನು
ಕೋಟಿ ಉಳಿಪೆಟ್ಟಿಟ್ಟರು
ಕದಲಲಾರೇನು,
ಮೂಕ ಪ್ರಾಣಿನೊಂದರು
ಮರಗುವ ಮನಸ್ಸು
ನಿನ್ನದೆಂದು ಬಲ್ಲೆನು

ನಾ ಇಟ್ಟ ಹೆಜ್ಜೆಗಳೆಲ್ಲ
ಅಳಿಸಿ ಹೋಗಿಬಿಡಲಿ
ಅರಸದಿರು ನನ್ನ
ಪ್ರೀತಿ ಬಡಿಸಿದ್ದೇನೆ,
ಬಂದ ಬಿಡಿಸಿದ್ದೇನೆ
ಹೋಗಿ ಬರುವೆನೆಂದು ಹೇಳಲಾರೆನು
ಕಾರಣ
ನಾ ಮರೆಯಾಗುವ  ಸಮಯ
ಗ್ರಹಣವಲ್ಲ ಪಾಣಿಗ್ರಹಣ!!!!
-ಶೃತಿ