shruthi

shruthi

Saturday, 24 November 2012

ಕನಸಿಗೊಂದು ಕೂಸು...!

ಕನಸೊಂದು ಕಂಡೆ
ಅದಕೊಂದು ಕುಸಾಯಿತು,
ಆ ಕೂಸಿಗೊಂದು ಆಸೆಯಾಯಿತು,
ಆಸೆ ಮತ್ತೊಂದು ಹಗಲುಗನಸಾಗಿ
ನನ್ನ ಕಾಡತೊಡಗಿತ್ತು!

ಕನಸನ್ನು ಬಸರು
ಮಾಡಿದ್ದು ಕಲ್ಪನೆಯೇ
ಎಂದು,
ಕನಸು ಹೇಳಲಿಲ್ಲ
ನಾನು ಕೇಳಲಿಲ್ಲ!

ಇನ್ನು ಮೆಚ್ಚಿ ಕಂಡ
ಹಗಲುಗನಸೆಲ್ಲ ,ತೊಗಲುಗೊಂಬೆಯಂತೆ
ನನ್ನದೇ ಆಟ,
ನನ್ನದೇ ಹುಡುಕಾಟ,
ನನ್ನದೇ ಬಡಿದಾಟ!

ಮತ್ತೊಂದು ಇರುಳಿಗೆ
ಕಾಯುತ ಭೂಮಿಯು
ಅಲಂಕರಿಸಿಕೊಂಡಳು,
ಸಂಜೆಯಂತೆ
ಸಡಗರದಲ್ಲಿ !

ನಾನು ಅವಳಂತೆ
ಮತ್ತೊಮ್ಮೆ
ಕನಸು ಕಾಣಲು
ಅಣಿಯಾದೆ
ಕನಸ ನನಸಾಗಿಸುವ ಮನಸಮಾಡಿ !!!!!!!!!
-ಶ್ರುತಿ

Tuesday, 11 September 2012

ಬೆಟ್ಟವ ದಾಟಿ ಬಂದ ಮೋಡದ ನೆರಳು.!

ಬೆಟ್ಟವ ದಾಟಿ ಬಂದ
ಮೋಡದ ನೆರಳು,
ತೊರೆದ ಮೇಲೆ
ಬಿಗಿದ ಕಣಿವೆಯ ಕೊರಳು

ಸಾಗರದ ಅಂಚಿನ ಮರಳಿಗೆ
ಅಲೆಗಳು ಹೇಳುವ ಗುಟ್ಟು
ಮರಳ ಸೇರಿ ಹಾಡಿ
ಹಂಚುವ ಗಾಳಿಗೆ ಗೊತ್ತು

ಬೆಳಗುವ ಕಿರಣ ತಂದ
ಬಳುವಳಿ
ಬಚ್ಚಿಟ್ಟುಕೊಂಡ ಭೂಮಿಗೆ
ತಾನೇ ಸ್ವಂತ

ಹೃದಯದಿ ಉದಯಿಸಿದ
ಚಂದ್ರನ ಮುಗುಳುನಗೆಯ
ಬಲ್ಲವಳು ನಲ್ಮೆಯ
ನೈದಿಲೆ ಮಾತ್ರ

ಕಾದ ಕಣ್ಣ ಬವಣೆ
ಅರಿಯಬಲ್ಲ
ಕಾದ ಹೆಂಚಿಗೆ ಕರುಣೆ
ತೋರಬಲ್ಲ
ಮಿಂಚಿಗೆ ಸಂಚ ಹೂಡಿ
ಸೆರೆಹಿಡಿಯಬಲ್ಲವನಾರು
ಬಲ್ಲವರ್ಯಾರು??
-ಶ್ರುತಿ

Friday, 27 July 2012

ಬಹುರೂಪಿ

ಅಗೋ ಅಲ್ಲೊಂದು
ಚಿನ್ನದ ತೇರು
ಹೂವಿನ ಸಿಂಗಾರ
ಮೇಳಗಳ ಝೇಂಕಾರ
ಪಂಜುಗಳ ಪಹರೆ
ಅರ್ಚನಾದಿಗಳಿಂದ ಅಲಂಕೃತ
ತೇಜಸ್ವಿಯಾದ ಮೂರ್ತಿ
ಗುಂಪುಗುಂಪಾದ ಜನಗಳು

ಇಗೋ ಇಲ್ಲೊಂದು
ಮನದ ತೇರು
ಸಿಂಗಾರವಿಲ್ಲ
ಝೇಂಕಾರವಿಲ್ಲ
ಪಹರೆಯಿಲ್ಲ
ಅಲಂಕಾರವಿಲ್ಲ
ಅದರದೇ ತೇಜಸ್ವಿ
ಇಲ್ಲಿ ನಾನೊಬ್ಬಳೆ

ಕಣ್ಣೆದುರಿನ ದೈವವು
ಮನದೊಳಗಿನ ಇವನು
ಇಬ್ಬರಿಗೂ ಮೆರವಣಿಗೆ
ತೆರೆಯಲ್ಲಿ ಒಬ್ಬರು
ಮರೆಯಲ್ಲಿಯೊಬ್ಬರು

ನೆಚ್ಚಿ ಮೆಚ್ಚಿ ನಾ
ಕಣ್ಮುಚ್ಚಿ ನೆನೆದು
ಕೈಮುಗಿದು ನಡದೆ
ಬಹುರೂಪಿ ನಿನೆಲ್ಲರೋಳಗಿರುವವನೆಂದು!!
-ಶೃತಿ

Saturday, 7 July 2012

ಮನಸ್ಸು ನೆರೆದಾಗ.!!

ಮನಸ್ಸು ನೆರೆದಾಗ
ಮಜ್ಜಿಗೆಯ ಹುಳಿ,
ಕಾಡುತಿವೆ ಅಮ್ಮನ ತುತ್ತು,
ಮರೆತ ಮುತ್ತು

ಬಾಲ್ಯ ಇನ್ನು ಕನಸಂತೆ,
ಮನದ ತುಂಬಾ ಚಿಂತೆಗಳ ಸಂತೆ
ಬರೀ ಸ್ವಾರ್ಥದ  ಜಾಗಟೆ,
ಹಣದ ತಮಟೆಯ ಸದ್ದು

ಸ್ಥಾನ ಮಾನಗಳ  ಗುದ್ದಾಟ
ತೃಪ್ತಿ  ಅತೃಪ್ತಿಗಳ ಎಳೆದಾಟ ,ಸೆಳೆದಾಟ
ಭಾವ ಸ್ಮಶಾನದಲ್ಲಿ ಅಲೆದಾಟ
ಆಗಾಗ ಉಮ್ಮಳಿಸುವ  ದುಃಖ
ಕಣ್ಣೋರಿಸಿದ  ಕೈಗಳ ನೆನಪು

ಸಂಬಂಧಗಳೆಲ್ಲ ಬೇಡಿಗಳೆನಿಸಿ,
ದ್ವಂದ್ವಗಳ ,ದೈವದಾಟಗಳ
ಹೊಕ್ಕು ಹೊರ ಬರುವಮುನ್ನ
ಆತ್ಮ ಸಂವಿಧಾನದಲ್ಲಿ ಹಲವು ತಿದ್ದುಪಡಿ

ಆಸೆ ಕನಸುಗಳ ಒತ್ತುವರಿ,
ಹುಡುಕುತ್ತಲೊಂದು ಗೊತ್ತುಗುರಿ
ಕಾಣುವ ಮುಂಚೆ ಭಾವಸ್ರಾವ!!
-ಶೃತಿ

Tuesday, 3 July 2012

ಹೋಗುವ ಮುನ್ನ .....!

ಸರಿದಿವೆ ಹೆಜ್ಜೆಗಳು
ಸರದಿಯಿಂದ
ಸೇರುವ ಬಯಕೆ
ಸುರಿವ ಮುಸ್ಸಂಜೆಯ
ಮಳೆಯಲ್ಲಿ ಕೊಚ್ಚಿಹೋಗಿದೆ

ಆಡದೆ ಉಳಿದ
ಅಮೂರ್ತ ಭಾವಗಳು
ಅಜ್ಞಾತವಾಗಿ,
ಅಳಿಸಿ ಹೋಗಿದೆ

ಕಲ್ಲು ಬಂಡೆಯಂತವಳು ನಾನು
ಕೋಟಿ ಉಳಿಪೆಟ್ಟಿಟ್ಟರು
ಕದಲಲಾರೇನು,
ಮೂಕ ಪ್ರಾಣಿನೊಂದರು
ಮರಗುವ ಮನಸ್ಸು
ನಿನ್ನದೆಂದು ಬಲ್ಲೆನು

ನಾ ಇಟ್ಟ ಹೆಜ್ಜೆಗಳೆಲ್ಲ
ಅಳಿಸಿ ಹೋಗಿಬಿಡಲಿ
ಅರಸದಿರು ನನ್ನ
ಪ್ರೀತಿ ಬಡಿಸಿದ್ದೇನೆ,
ಬಂದ ಬಿಡಿಸಿದ್ದೇನೆ
ಹೋಗಿ ಬರುವೆನೆಂದು ಹೇಳಲಾರೆನು
ಕಾರಣ
ನಾ ಮರೆಯಾಗುವ  ಸಮಯ
ಗ್ರಹಣವಲ್ಲ ಪಾಣಿಗ್ರಹಣ!!!!
-ಶೃತಿ

Tuesday, 8 May 2012

ಇದು ಬಿಸಿಲನಾಡಿನ ಭಾವಗೀತೆ
ಇಲ್ಲಿ ,,
ಬಿಸಿಲಿನ ಝಳ
ಬಿರಿದಿಹ ಭೂಮಿ
ಬಳಲಿದ ದೇಹಗಳು
ಬಾಗಿದ ಬೆನ್ನುಗಳು
ಒಣಗಿದ ಮರಗಳು

ಹನಿ ನೀರಿಗೆ ಪರಿತಪಿಸುವ
ಬಾಯಿಗಳು,ಬಾವಿಗಳು
ಬೋಳು ಮರಗಳು
ದಾಹವನೀಗದೆ ಕಂಗೆಟ್ಟ
ಜಾನುವಾರಗಳು

ಬಸಿಯುತ್ತಿರುವ ಬೆವರು
ತಿರುಗುತ್ತಿರುವ ಕಣ್ಣುಗಳು
ಕಾದ ಹಂಚಿನ ಮನೆಗಳು
ಕಂಡ ಕಂಡವರ ಮನೆಯ
ಹೊಂಡ,ಕೊಂಡಗಳಲ್ಲಿ
ಕಣ್ಣು ಹಾಕುವ ಪಕ್ಷಿಗಳು

ಇಲ್ಲಿ ಬದುಕು ಬರ್ಬರ
ಬಡವರಿಗೆ ಮಾತ್ರ,
ಸಿರಿವಂತರಿಗೆ ಎಸಿ ರೂಮ್,ಮಿನರಲ್ ವಾಟರ್
ಇನ್ನು ದುಡಿವವರ ಪಾಡನು
ಕೇಳದಿದ್ದರೆ ಲೇಸು

ಬರವನ್ನು ಅಪ್ಪಿ ಕುಳಿತ
ಭೂತಾಯಿಯ ಮನವನೋಲಿಸಲು
ಬರಬಾರದ ಒಮ್ಮೆ ಮಳೆರಾಯ?
-ಶ್ರುತಿ

 

Friday, 6 April 2012

ಕಡೆಗೆ ನಿನ್ನ ಜಾತಿಗಾದರು ನ್ಯಾಯ ಮಾಡು ಮಾನವ!!!

ಮನದ ಕೊಳೆಯ ತೊಳೆವ
ಮಡಿವಾಳ,
ತೊರೆದ ಮನಸುಗಳ ಹೊಲೆಯುವ
ದರ್ಜಿ ,

ಅಂದದ ಆಲೋಚನೆಗಳ ಹದ ಮಾಡಿ
ರೂಪ ಕೊಡುವ ಕುಂಬಾರ,
ಆತ್ಮಕ್ಕೆ ಲಿಂಗವನ್ನು ಧರಿಸಿ
ಪೂಜಿಸುವ ಜಂಗಮ,

ಅಕ್ಷರ ಜ್ಞ್ಯಾನ ದಾನ ಮಾಡುವ
ಬ್ರಾಹ್ಮಣ,
ಸ್ನೇಹ,ಪ್ರೀತಿಯನ್ನು ಕೊಡು ಕೊಳ್ಳುವ
ವೈಶ್ಯ ,
ಅರಿಷಡ್ವರ್ಗಗಳೊಂದಿಗೆ ಹೋರಾಡುವ
ಕ್ಷತ್ರಿಯ,
ಅಸಾಹಯಕರ ಸೇವೆಗೈಯುವ
ಶೂದ್ರ ,
ದುಶ್ಚಟ ಮತ್ತು ದುರಾಲೋಚನೆಗಳಿಗೆ
ಅಸ್ಪೃಶ್ಯನಾಗಿ
ಕಡೆಗೆ ನಿನ್ನ ಜಾತಿಗಾದರು ನ್ಯಾಯ ಮಾಡು ಮಾನವ!!!
-ಶ್ರುತಿ